ಬಸವಪ್ಪಶಾಸ್ತ್ರಿ
1843-91. ಕನ್ನಡ-ಸಂಸ್ಕøತ ಭಾಷೆಗಳಲ್ಲಿ ವಿಶೇಷ ಪ್ರಭುತ್ವ ಪಡೆದ ಪ್ರಕಾಂಡ ಪಂಡಿತರು. ಪ್ರತಿಭಾಸಂಪನ್ನರು. ಅಭಿನವಕಾಳಿದಾಸ ಎಂಬ ಬಿರುದು ಧರಿಸಿ ಖ್ಯಾತರಾದವರು. ಇವರು ಬೆಂಗಳೂರು ಜಿಲ್ಲೆಯ ನಾರಸಂದ್ರದ ರುದ್ರಾಕ್ಷಿಮಠದ ಮುರುಡು ಬಸವಸ್ವಾಮಿಗಳ ಮೊಮ್ಮಕ್ಕಳು, ಮುಮ್ಮಡಿ ಕೃಷ್ಣರಾಜ ಒಡೆಯರ ಸಮ್ಮುಖ ಪುರೋಹಿತರಾದ ಮಹಾದೇವಶಾಸ್ತ್ರಿ ಮತ್ತು ಬಸವಮ್ಮನವರ ಏಕಮಾತ್ರ ಪುತ್ರರು. ಜಗದ್ಗುರು ರೇಣುಕಾಚಾರ್ಯ ಸಂಪ್ರದಾಯಕ್ಕೆ ಸೇರಿದ ವೀರಮಾಹೇಶ್ವರ ವಂಶಸ್ಥರು. ಹುಟ್ಟಿದ್ದು ಶುಭಕೃತುನಾಮ ಸಂವತ್ಸರದ ವೈಶಾಖ ಶುದ್ಧ ಬಿದಿಗೆಯಂದು (ಕ್ರಿ.ಶ. 1843). ಚಿಕ್ಕಂದಿನಲ್ಲಿಯೆ ತಂದೆತಾಯಿಗಳನ್ನು ಕಳೆದುಕೊಂಡ ಇವರ ಮೇಲೆ ಅರಮನೆಯ ರಾಜಕವಿಗಳಾದ ಅಳಿಯ ಲಿಂಗರಾಜರ ಕೃಪಾದೃಷ್ಟಿ ಬಿತ್ತು. ಅನಂತರ ಅರಮನೆಯ ಉದಾರಾಶ್ರಯದಲ್ಲಿ ಬೆಳೆದು ವಿದ್ಯಾವಂತರಾದರು. ಹದಿನೆಂಟನೆಯ ವಯಸ್ಸಿನಲ್ಲಿಯೆ ಕೃಷ್ಣರಾಜ ಪ್ರಭುಗಳನ್ನು ಕುರಿತ ಕೃಷ್ಣರಾಜಾಭ್ಯುದಯ ಎಂಬ ಕೃತಿಯನ್ನು ಚಂಪೂವಿನಲ್ಲಿ ರಚಿಸಿ ರಾಜಮನ್ನಣೆಗೆ ಪಾತ್ರರಾಗಿ ಆಸ್ಥಾನಕವಿ ಎನಿಸಿದರು. ಅನಂತರ ದಿವಾನ್ ರಂಗಾಚಾರ್ಯರ ಕಾರುಣ್ಯದಿಂದ ಬಾಲಕರಾಗಿದ್ದ ಚಾಮರಾಜ ಒಡೆಯರಿಗೆ ವಿದ್ಯಾಗುರುಗಳಾದರು. ಅಲ್ಲಿಂದಾಚೆಗೆ ಶಾಸ್ತ್ರಿಗಳ ಅಭ್ಯುದಯದ ಬಾಗಿಲು ತೆರೆಯಿತು. ಮೈಸೂರು ಅರಮನೆಯಲ್ಲಿ ರಾಜಗುರುಗಳು, ಆಸ್ಥಾನ ವಿದ್ವಾಂಸರು, ರಾಜಪುರೋಹಿತರು ಆದರು. ಅಳಿಯ ಲಿಂಗರಾಜರಿಗೂ ದಿವಾನ್ ರಂಗಾಚಾರ್ಯರಿಗೂ ನಾಟಕದ ಗೀಳು ಬಹಳವಿದ್ದುದರಿಂದ, 1882ರಲ್ಲಿ ಸ್ಥಾಪಿತವಾದ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಎಂಬ ಕಂಪನಿಗೆ ಹಲವು ನಾಟಕಗಳನ್ನು ಭಾಷಾಂತರಿಸಿ ಕೊಟ್ಟು ಕನ್ನಡ ರಂಗಭೂಮಿಗೂ ಅಮೂಲ್ಯ ಸೇವೆ ಸಲ್ಲಿಸಿದರು. ಕನ್ನಡದಲ್ಲಿ ಅಭಿನಯ ನಾಟಕಗಳೇ ಇಲ್ಲದಿದ್ದಾಗ ಶಾಸ್ತ್ರಿಗಳು ಕನ್ನಡಿಸಿದ ರತ್ನಾವಳಿ ವಿಕ್ರಮೋರ್ವಶೀಯ, ಉತ್ತರರಾಮಚರಿತ ಮತ್ತು ಚಂಡಕೌಶಿಕ ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡು ಜನರ ಮನ್ನಣೆ ಪಡೆದವು. ಕೇವಲ ಸಂಸ್ಕøತ ನಾಟಕಗಳನ್ನಲ್ಲದೆ ಇಂಗ್ಲಿಷ್‍ನಿಂದ ಷೇಕ್ಸ್‍ಪಿಯರ್‍ನ ಒತೆಲೊ ನಾಟಕವನ್ನು ಶೂರಸೇನ ಚರಿತ್ರೆ ಎಂಬ ಹೆಸರಿನಲ್ಲಿ ಕನ್ನಡಿಸಿದ ಕೀರ್ತಿಯೂ ಇವರದೆ.

	ಶಾಸ್ತ್ರಿಗಳದ್ದು ದುರಂತ ಮರಣ. ಒಂದು ಸಂಜೆ ನೀಲಗಿರಿ ರಸ್ತೆಯಲ್ಲಿ ವಿಹಾರಕ್ಕಾಗಿ ಕುದುರೆಗಾಡಿಯಲ್ಲಿ ಹೋಗಿದ್ದಾಗ ಗಾಡಿ ಕೊರಕಲಿಗೆ ಬಿದ್ದು ಶಾಸ್ತ್ರಿಗಳ ಹೊಟ್ಟೆಗೆ ಬಲವಾದ ಪೆಟ್ಟು ತಗುಲಿತು. ಆ ವ್ರಣ ಗುಣವಾಗದೆ ಮೂರು ದಿನಗಳವರೆಗೆ ನರಳಿ 1891ನೆಯ ಫೆಬ್ರುವರಿಯಲ್ಲಿ ತಮ್ಮ ನಲವತ್ತೆಂಟನೆಯ ವಯಸ್ಸಿನಲ್ಲಿ ಶಿವಾಧೀನರಾದರು.

	ಶಾಸ್ತ್ರಿಗಳು ರಚಿಸಿದ 28 ಗ್ರಂಥಗಳಲ್ಲಿ 11 ಭಾಷಾಂತರಗಳು; 17 ಸ್ವತಂತ್ರ ಗ್ರಂಥಗಳು (ಅವುಗಳಲ್ಲಿ 5 ಕನ್ನಡ, 12 ಸಂಸ್ಕøತ).

	ಭಾಷಾಂತರಗಳು: ಕಾಳಿದಾಸನ ಅಭಿಜ್ಞಾನಶಾಕುಂತಲ, ವಿಕ್ರಮೋರ್ವಶೀಯ, ಭವಭೂತಿಯ ಉತ್ತರರಾಮಚರಿತ್ರೆ, ಮಾಲತೀ ಮಾಧವ; ಶ್ರೀ ಹರ್ಷನ ರತ್ನಾವಳಿ; ಕ್ಷೇಮೀಶ್ವರನ ಚಂಡಕೌಶಿಕ, ಭರ್ತೃಹರಿಯ ನೀತಿಶತಕ, ಶೃಂಗಾರಶತಕ, ವೈರಾಗ್ಯ ಶತಕ; ಬಾಣನ ಹರ್ಷಚರಿತ; ಷೇಕ್ಸ್‍ಪಿಯರನ ಒತೆಲೊ ನಾಟಕದ ಕನ್ನಡ ರೂಪವಾದ ಶೂರಸೇನ ಚರಿತ್ರೆ.

	ಸ್ವತಂತ್ರ ಕೃತಿಗಳು - ಕನ್ನಡ: ಕೃಷ್ಣರಾಜಾಭ್ಯುದಯ (ಕೃತಿ ಉಪಲಬ್ಧವಿಲ್ಲ); ಸಾವಿತ್ರೀ ಚರಿತ್ರೆ; ನೀತಿಸಾರಸಂಗ್ರಹ; ಶ್ರೀ ರೇಣುಕ ವಿಜಯ (ಅಪೂರ್ಣ); ದಮಯಂತೀ ಸ್ವಯಂವರ.

	ಸಂಸ್ಕøತ (ಅನುಪಲಬ್ಧ ಕೃತಿಗಳು): ಬಿಲ್ವವೃಕ್ಷ ಪೂಜಾವಿಧಿ, ಶಂಕರೀ ನಕ್ಷತ್ರ ಮಾಲಾ, ಬಸವೇಶಾಷ್ಟಕ, ಅಷ್ಟಮೂರ್ತಿ ತನಯಾಷ್ಟಕ, ದಕ್ಷಿಣಾಮೂತ್ರ್ಯಷ್ಟಕ, ಶಂಕರ ಶತಕ.

	ಉಪಲಬ್ಧಕೃತಿಗಳು: ಶಿವಾಷ್ಟಕಮ್, ಶಿವಭಕ್ತಿ ಸುಧಾತರಂಗಿಣೀ, ತ್ರಿಷಷ್ಠಿ ಪುರಾತನಸ್ತವ, ಅಂಬಾಷೋಡಶ ಮಂಜರೀ ಆರ್ಯಾಶತಕಮ್, ಶಾರದಾ ದಂಡಕಮ್ ಇವರ ಭಾಷಾಂತರ ಕೃತಿಗಳಲ್ಲಿ ಅಮೂಲ್ಯವಾದುದು ಶಾಕುಂತಲ. ಅಚ್ಚುಕಟ್ಟಾದ ಭಾಷಾಂತರ. ಇದುವರೆವಿಗೂ ಭಾಷಾಂತರವಾಗಿರುವ ಪ್ರಪಂಚದ ಎಲ್ಲ ಭಾಷೆಗಳ ಭಾಷಾಂತರಕ್ಕಿಂತ ಕನ್ನಡ ಶಾಕುಂತಲ, ಉತ್ತಮೋತ್ತಮವೆಂದು ಪಂಡಿತರಿಂದ ಪರಿಗಣಿತವಾಗಿದೆ. ಈ ಕೃತಿರತ್ನವನ್ನು ಮೆಚ್ಚಿದ ದಿವಾನ್ ರಂಗಾಚಾರ್ಯರು ಶಾಸ್ತ್ರಿಗಳಿಗೆ ಅಭಿನವ ಕಾಳಿದಾಸನೆಂಬ ಪ್ರಶಸ್ತಿ ನೀಡಿ ಗೌರವಿಸಿದರು.

	ಹಳೆಯ ಮೈಸೂರಿನ ನಾಡಗೀತೆಯಾದ `ಕಾಯೌ ಶ್ರೀಗೌರಿ' ಎಂಬ ಹಾಡನ್ನು ರಚಿಸಿದವರು ಇವರೇ.

	ಶಾಸ್ತ್ರಿಗಳು ಘನ ವಿದ್ವಾಂಸರು ಹೇಗೋ ಅಷ್ಟೇ ಘನವಾದ ಆಶುಕವಿಗಳೂ ಹೌದು. ಸಂಗೀತ ಮತ್ತು ಗಮಕ ಕಲೆಯಲ್ಲಿಯೂ ಇವರಿಗೆ ಪಾಂಡಿತ್ಯವಿತ್ತು. ಮಿಗಿಲಾಗಿ ತುಂಬ ರಸಿಕ ಕವಿಗಳೆಂಬ ಅಭಿಮಾನಕ್ಕೂ ಪಾತ್ರರಾಗಿದ್ದರು.
(ಎಸ್.ಎಸ್.ಎಂಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ